  ಮೂಲದೊಡನೆ ಪರಿಶೀಲಿಸಿ
ಕಾಲ್ಡ್‍ವೆಲ್, ರಾಬರ್ಟ್ 

  1814-1891. ದ್ರಾವಿಡ ಭಾಷೆಗಳೆಲ್ಲ ಒಂದೇ ಮೂಲಕ್ಕೆ ಸೇರಿದವೆಂದು ಸಿದ್ಧಾಂತ ಮಾಡಿದವರಲ್ಲಿ ಪ್ರಮುಖನಾದವ; ಅವನ್ನು ಕುರಿತ ತುಲನಾತ್ಮಕ ವ್ಯಾಕರಣವೊಂದನ್ನು ಬರೆದಿದ್ದಾನೆ. ತಮಿಳು ನಾಡಿನಾದ್ಯಂತ ಕಾಲ್ಡ್ವೆಲ್ ಐಯ್ಯರ್ ಎಂದು ಖ್ಯಾತನಾದ ಈತ ಹುಟ್ಟಿದ್ದು ಐರ್ಲೆಂಡಿನ ಗ್ಲ್ಯಾಡಿ ನದಿಯ ದಡದಲ್ಲಿರುವ ಹಳ್ಳಿಯೊಂದರಲ್ಲಿ. ಬಾಲ್ಯವನ್ನು ಸ್ಕಾಟ್ಲೆಂಡಿನ ಗ್ಲಾಸ್ಗೊ ನಗರದಲ್ಲಿ ಕಳೆದ. ಡಬ್ಲಿನ್ನಿನ ಕಲೆಯ ಕಾಲೇಜಿನಲ್ಲಿ ಚಿತ್ರಕಲೆ ಅಭ್ಯಾಸ ಮಾಡಿದ ತರುವಾಯ ಈತನನ್ನು ಕ್ರೈಸ್ತ ಪಾದ್ರಿಯಾಗಲು ಲಂಡನ್ನಿನ ರೆವರೆಂಡ್ ಸಂಘದ ಪ್ರತಿನಿಧಿಯಾಗಿ ಅಧ್ಯಯನಕ್ಕೆಂದು ಗ್ಲಾಸ್ಗೊ ಕಾಲೇಜಿಗೆ ಕಳುಹಿಸಲಾಯಿತು. ಪಾದ್ರಿಯಾಗಿನೇಮಕಗೊಂಡ ಮೇಲೆ ಕೈಸ್ತಧರ್ಮ ಪ್ರಸಾರಕ್ಕಾಗಿ ಈತ ಭಾರತಕ್ಕೆ ಬಂದ. ತಮಿಳು ನಾಡಿನ ಕಡೆಗೆ ಬಂದವ 1841ರವರೆಗೆ ಮದ್ರಾಸಿನಲ್ಲಿಯೇ ಇದ್ದು ತಮಿಳನ್ನು ಕಲಿತ. ಅನಂತರ ಪೋಪ್, ಪವರ್ ಮತ್ತು ಆಂಡರ್ಸನ್ನರ ಸ್ನೇಹ ಬೆಳೆಸಿದ. ಕಾಲು ನಡಿಗೆಯಲ್ಲೆ, ತಮಿಳು ನಾಡಿನಾದ್ಯಂತ ಸಂಚರಿಸಿ ತಮಿಳು ನಾಡು, ನುಡಿ, ಸಾಹಿತ್ಯಗಳ ನಿಕಟ ಪರಿಚಯ ಮಾಡಿಕೊಂಡ. ಆಗ ಈತನಿಗೆ ತಂಜÁವೊರಿನ ಮಾಯಾವರಮ್ ವೇದನಾಯಕಮ್ ಪಿಳ್ಳೆ ಮತ್ತು ನೀಲಗಿರಿಯ ರೆವರೆಂಡ್ ಸ್ಪೆ£ರ್‍ರವg Àಸಖ್ಯ ದೊರೆಯಿತು. ತಿರುನೆಲ್ವೇಲಿಯ (ತಿನ್ನವೆಲ್ಲಿ) ಇಡಯನ್‍ಕುಡಿಯಲ್ಲಿ ಐವತ್ತು ವರ್ಷಗಳ ಕಾಲ ಇದ್ದು ಮತಪ್ರಚಾರಕನಾಗಿ ಸೇವೆಸಲ್ಲಿಸಿದ. ತಮಿಳಿನಲ್ಲಿ ಬರೆಯಲಾದ ಕ್ರೈಸ್ತಧರ್ಮದ ಪ್ರಾರ್ಥನಾ ಪುಸ್ತಕ ಪರಿಷ್ಕರಣ ಸಮಿತಿ ಮತ್ತು ಬೈಬಲ್ ಅನುವಾದ ಸಮಿತಿಯ ಸದಸ್ಯನಾಗಿಯೂ ಕೆಲಸ ಮಾಡಿದ. ಈತನಿಗೆ ತಮಿಳಿನ ಜೊತೆಗೆ ತೆಲುಗು ಮಲೆಯಾಳಂ ಮತ್ತು ಕನ್ನಡ ಭಾಷೆಗಳೂ ತಿಳಿದಿದ್ದುವು.

 ದ್ರಾವಿಡ ಭಾಷೆಗಳ ಪರಿಚಯವಿದ್ದು ಅದರಲ್ಲೂ ತಮಿಳು ಭಾಷೆಯಲ್ಲಿ ವಿಶೇಷ ಪರಿಶ್ರಮವಿದ್ದ ಕಾಲ್ಡೆವೆಲ್ ಎ ಕಂಪ್ಯಾರಿಟೇವ್ ಗ್ರಾಮರ್ ಆಫ್ ದಿ ಡ್ರಾವಿಡಿಯನ್ ಆರ್ ಸೌತ್ ಇಂಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್ (ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ) ಮತ್ತು ತಿನ್ನವೆಲ್ಲಿಯ ಇತಿಹಾಸ ಎಂಬ ಗ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದಾನೆ. ಇವುಗಳಲ್ಲಿ ಮೊದಲು ಪುಸ್ತಕ ದ್ರಾವಿಡ ಭಾಷಾ ವಿಜ್ಞಾನದ ಸಂಶೋಧಕರಿಗೆ ಆಕರಗ್ರಂಥವೆನಿಸಿದೆ. ಇದು 1856ರಲ್ಲಿ ಮೊದಲು ಪ್ರಕಟವಾಗಿ 1875ರಲ್ಲಿ ಪರಿಷ್ಕøತಗೊಂಡು ಎರಡನೆಯ ಮುದ್ರಣವಾಗಿ ಮುದ್ರಣ ಪ್ರಕಟವಾಗಿ 1875ರಲ್ಲಿ ಪರಿಷ್ಕøತಗೊಂಡು ಎರಡನೆಯ ಮುದ್ರಣವಾಗಿ ಹೊರಬಂತು. ಪ್ರತಿಗಳು ಮುಗಿದ ಕಾರಣ ಗ್ರಂಥ ನಾಲ್ಕನೆಯ ಮುದ್ರಣ ಕಂಡಿತು. ಈ ಗ್ರಂಥವನ್ನು ಮೊದಲಿಗೆ ಲಂಡನಿನ ರೂಡ್ಲೆಜ್ ಅಂಡ್ ಕೆಗನ್ ಪಾಲ್ ಲಿಮಿಟೆಡ್ ಸಂಸ್ಥೆಯವರೂ ಅನಂತರ ಮದ್ರಾಸು ವಿಶ್ವವಿದ್ಯಾನಿಲಯದವರೂ ಪ್ರಕಟಿಸಿದ್ದಾರೆ. ಮದ್ರಾಸು ವಿಶ್ವವಿದ್ಯಾನಿಲಯದ ಪ್ರಕಟಣೆಯನ್ನು ತಿದ್ದಿ ಸಂಪಾದಿಸಿದವರು ರೆವರೆಂಡ್ ಜೆ. ಎಲ್ ವ್ಯಾಟ್ ಮತ್ತು ಟಿ. ರಾಮಕೃಷ್ಣ ಪಿಳ್ಳೈ ಅವರು.

 ಕಾಲ್ಡ್‍ವೆಲ್‍ನ ಈ ತೌಲನಿಕ ವ್ಯಾಕರಣ ದ್ರಾವಿಡ ಭಾಷಾವಿಜ್ಞಾನ ಕ್ಷೇತ್ರದ ಒಂದು ಮಹತ್ಸಾಧನೆ. ದ್ರಾವಿಡ ಭಾಷೆಗಳ ಸ್ವತಂತ್ರ ಅಸ್ತಿತ್ವದ ಕಲ್ಪನೆ ಇನ್ನೂ ಅಲ್ಲಲ್ಲಿ ಮೂಡುತ್ತಿದ್ದ ಕಾಲದಲ್ಲಿ ಆ ಭಾಷೆಗಳನ್ನು ಸ್ವತಂತ್ರ ಗುಂಪುಗಳೆಂದು ಖಚಿತವಾಗಿ ಸಾರಿ, ಇತರ ಯಾವ ಸಹಾಯವೂ ಇಲ್ಲದೆ ಪ್ರಥಮವಾಗಿ ದ್ರಾವಿಡ ಭಾಷೆಗಳ ತೌಲನಿದ ವ್ಯಾಕರಣವನ್ನು ಬರೆದದ್ದು ಈತನ ಪ್ರತಿಭೆ, ಪಾಂಡಿತ್ಯಗಳ ದ್ಯೋತಕವಾಗಿದೆ. ಭಾರೋಪೀಯ ಭಾಷೆಗಳ ತೌಲನಿಕ ಅಧ್ಯಯನ ಆಗಿನ್ನೂ ಪ್ರಾರಂಭದೆಶೆಯಲ್ಲಿತ್ತು. ಭಾಷಾ ಪಂಡಿತರೆಲ್ಲರ ಗಮನ ಅತ್ತಕಡೆ ಇದ್ದ ಕಾಲದಲ್ಲಿ ಆ ವರ್ಗದಿಂದ ಬೇರೆಯಾದ, ದ್ರಾವಿಡ ವರ್ಗವೊಂದರ ಈ ಗುಂಪನ್ನು ತೆಗೆದುಕೊಂಡು ಕೆಲಸ ಮಾಡಿದ್ದು ಈತನ ಅದ್ಭುತ ಸಾಧನೆಯೆಂದೇ ಹೇಳಬೇಕು. ಇದು ದ್ರಾವಿಡ ಭಾಷೆಗಳ ಇತಿಹಾಸ ದೃಷ್ಟಿಯಿಂದ ಅಪೂರ್ವವೂ ಅಮೂಲ್ಯವೂ ಆದ ಗ್ರಂಥ. ಈತ ದ್ರಾವಿಡ ಭಾಷಾಶಾಸ್ತ್ರದ ಅಸ್ತಿತ್ವಕ್ಕೆ ಭದ್ರವಾದ ಬುನಾದಿ ಹಾಕಿದ್ದಲ್ಲದೆ ಅದಕ್ಕೊಂದು ರೂಪ ಕೊಟ್ಟ.. ದ್ರಾವಿಡ ಭಾಷೆಗಳ ವಿಷಯದಲ್ಲಿ ಈ ಹೊತ್ತಗೆ ಹೊಸ ವಿಚಾರ ವೇದಿಕೆಯೊಂದನ್ನು ನಿರ್ಮಿಸಿತು. 1856ರಲ್ಲಿ ಈತ ಪುಸ್ತಕವನ್ನು ಬರೆಯುವಾಗ ಸ್ಲಾವೋನಿಕ್ ಭಾಷೆಗಳ ಮೇಲೆ ಬರೆದ ಗಿಮ್ ಮತ್ತು ಬಾಪ್ ಬದುಕಿದ್ದರು. ಈ ಕಾಲಕ್ಕೆ ಭಾಷಾಶಾಸ್ತ್ರ ಒಂದು ಘಟ್ಟವನ್ನು ಮುಟ್ಟಿತ್ತು. ಬ್ರಗ್ಮನ್, ವರ್ನರ್ ಮುಂತಾದ ತರುಣ ವೈಯಾಕರಣಿಗಳು ಧ್ವನಿಸಾಮ್ಯಗಳ ಮೇಲೆ ಕೆಲಸ ಮಾಡಿ, ಕಾಲ ದೇಶ ಪರಿಸರಗಳ ದೃಷ್ಟಿಯಿಂದ ವಿಚಾರ ಮಾಡಿ ಧ್ವನಿತತ್ತ್ವಗಳಿಗೆ ಅಪವಾದಗಳೇ ಇಲ್ಲ ಎಂದರು. ಅಲ್ಲಿಗೆ ಭಾಷಾಶಾಸ್ತ್ರ ಒಂದು ನಿಶ್ಚಿತ ಘಟ್ಟವನ್ನು ಮುಟ್ಟಿತ್ತು ಎನ್ನಬೇಕು. ಭಾಷಾಶಾಸ್ತ್ರ ಸರ್ವಾಂಗೀಣವಾಗಿ ಬೆಳೆಯದ ಮುನ್ನವೇ ಕಾಲ್ಡ್‍ವೆಲ್ ಆ ಶಾಸ್ತ್ರದ ನಿಯಮಗಳೆಲ್ಲವನ್ನು ಪರಿಭಾವಿಸಿ ಕೆಲಸ ಮಾಡಿದ್ದು ನಿಜಕ್ಕೂ ಅದ್ಭುತವೇ ಸರಿ. ಜೂಲ್ಸ್ ಬ್ಲಾಕ್ ಈ ವ್ಯಾಕರಣದ ಮುಖ್ಯಾಂಶಗಳನ್ನು ಮೂಲಕ್ರಮವನ್ನು ಮುಕ್ತಕಂಠದಿಂದ ಹೊಗಳಿದ್ದಾನೆ.

 ವ್ಯಾಕರಣದಂಥ ಜಟಿಲವಾದ ನೀರಸ ಶಾಸ್ತ್ರವನ್ನೂ ಕಾಲ್ಡ್‍ವೆಲ್ ರಮ್ಯವಾಗಿ ತಿಳಿಸುತ್ತಾನೆ; ತಾನು ಹೇಳುವುದನ್ನು ಸ್ಪಷ್ಟವಾಗಿ ಖಚಿತವಾಗಿ ಹೇಳುತ್ತಾನೆ. ಆದರೆ ಧ್ವನಿತತ್ತ್ವಗಳನ್ನು ಅಳವಡಿಸಿಕೊಳ್ಳದಿರುವುದೊಂದು ಇವನಲ್ಲಿರುವ ದೋಷ. ಬಹುಮಟ್ಟಿಗೆ ದ್ರಾವಿಡ ಭಾಷೆಗಳಿಂದಲೇ ಉದಾಹರಣೆಗಳನ್ನು ಕೊಟ್ಟರೂ ಬೇರೆ ಭಾಷೆಗಳೊಡನೆ ತುಲನೆ ಮಾಡುತ್ತಾನೆ. ಸಿಥಿಯನ್ ಅಥವಾ ಕುರೇನಿಯನ್ ಭಾಷಾ ಸಮುದಾಯವೊಂದನ್ನು ಪ್ರಸ್ತಾಪಿಸಿ ದ್ರಾವಿಡ ಭಾಷಾಸಮುದಾಯದ ಸಂಬಂಧವನ್ನು ಅದರೊಂದಿಗೆ ಜೋಡಿಸಿ ತೊಡಕಿಗೆ ಸಿಕ್ಕುತ್ತಾನೆ. ಸಿಥಿಯನ್ ಭಾಷಾ ಸಮುದಾಯವೊಂದನ್ನು ಪ್ರಸ್ತಾಪಿಸಿ ದ್ರಾವಿಡ ಭಾಷಾಸಮುದಾಯದ ಸಂಬಂಧವುಂಟೆಂದು ಹೇಳುತ್ತಾನೆ. ಆದರೆ ಆ ವಾದ ಅನುಪಾದೇಯವಾದುದು. ಈತನಿಗೆ ದೊರೆತ ಸಾಮಗ್ರಿ ಅಪೂರ್ಣವಾಗಿತ್ತು ಎಂಬುದನ್ನು ನಾವು ಮರೆಯಬಾರದು. ತಮಿಳು ಭಾಷೆಯಲ್ಲದೆ ಉಳಿದ ಭಾµಗಳಲ್ಲಿ ಕಾಲ್ಡ್‍ವೆಲ್‍ನಿಗೆ ಆಳವಾದ ಜ್ಞಾನವಿರಲಿಲ್ಲ. ಆದುದರಿಂದ ಗ್ರಾಂಥಿಕ ಭಾಷೆಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ಕೆಲಸ ಮಾಡಿದ. ಈತನ ವಿಷಯ ಸಂಗ್ರಹಣೆ ಹಾಗೂ ಜೋಡಣೆ, ಕ್ರಮಬದ್ದವಾದ ವಿಂಗಡಣೆ ಅನನುಕರಣೀಯವಾದುದು. ಈತನಲ್ಲಿ ಪ್ರತಿಭೆ ಪಾಂಡಿತ್ಯಗಳೆರಡೂ ಸಮ ಪ್ರಮಾಣದಲ್ಲಿದ್ದವು. ಆದುದರಿಂದ ದ್ರಾವಿಡ ಭಾಷೆಗಳು ಸಂಸ್ಕøತ ಭಾಷೆಯಿಂದ ಬಂದವಲ್ಲವೆಂದು ಈತ ಒಂದು ನೂತನ ಶಕೆಯನ್ನೇ ನಿರ್ಮಿಸಿದ. ದೋಷಗಳು ಏನೇ ಇದ್ದರೂ ಇದೊಂದು ಉಪಾದೇಯ ಗ್ರಂಥ.

 ಈ ಗ್ರಂಥದ ಜೊತೆಗೆ ತಮಿಳಿನಲ್ಲಿ ಕಾಲ್ಡ್‍ವೆಲ್ ಬೈಬಲ್ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳನ್ನು ಬರೆದಿದ್ದಾನೆ. ಈತ ರಾಯಲ್ ಏಷ್ಯಾಟಿಕ್ ಸೊಸೈಟಿಯ ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದ ಸದಸ್ಯನಾಗಿದ್ದ. ಧರ್ಮ ಮತ್ತು ಸಾಹಿತ್ಯಗಳಲ್ಲಿ ಈತನಿಗಿದ್ದ ಪ್ರೌಢಿಮೆ, ಪಾಂಡಿತ್ಯಗಳನ್ನು ಮೆಚ್ಚಿ ಡಹ್ರ್ಯಾಮ್ ವಿಶ್ವವಿದ್ಯಾನಿಲಯವೀತನಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನಿತ್ತು ಗೌರವಿಸಿತು. ಈತನ ವಿದ್ವತ್ತು ಹಾಗೂ ಸಾರ್ವಜನಿಕ ಸೇವೆಯನ್ನು ಮನಗಂಡು 1877ಯಲ್ಲಿ ಈತನನ್ನು ತಿನ್ನವೆಲ್ಲಿಯ ಬಿಷಪ್ ಆಗಿ ನೇಮಕ ಮಾಡಲಾಯಿತು. ವಯಸ್ಸಾದ ಕಾರಣದಿಂದ ವಯಸ್ಸಾದ ಕಾರಣದಿಂದ 1891ರಲ್ಲಿ ಬಿಷಪ್ ವೃತ್ತಿಯಿಂದ ನಿವೃತ್ತನಾಗಿ ಕ್‍ಲ್ಡ್‍ವೆಲ್ ಕೊಡೈಕೆನಾಲಿಗೆ ಹೋದ. ಅದೇ ವರ್ಷ ಮರಣ ಹೊಂದಿದ. ಇಡಯನ್ ಕುಡಿಯಲ್ಲಿ ಈತನೇ ಕಟ್ಟಿಸಿದ ಚರ್ಚಿನಲ್ಲಿ ಈತನ ಸಮಾಧಿ ಇದೆ.          

 (ಬಿ.ಎನ್.ಸಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ